ಭೌತವಿಜ್ಞಾನ

ಭೌತವಿಜ್ಞಾನ ಅಧ್ಯಯನ ವಿಭಾಗವನ್ನು 1960 ರಲ್ಲಿ ಆರಂಭಿಸಲಾಯಿತು. ಮೊದಲಿಗೆ ಎಂ.ಎಸ್.ಸಿ ತರಗತಿಗಳನ್ನು ಮಾನಸಗಂಗೋತ್ರಿಯಲ್ಲಿ ಈಗ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿರುವ ಜಯಲಕ್ಷ್ಮಿ ವಿಲಾಸ ಮಹಲ್ ನಲ್ಲಿ ನಡೆಸಲಾಗುತಿತ್ತು. ಈಗಿರುವ ಹೊಸ ಕಟ್ಟಡಕ್ಕೆ ಸರ್ ಸಿ.ವಿ. ರಾಮನ್ ರವರು 1961ರಲ್ಲಿ ಶಂಕುಸ್ಥಾಪನೆಯನ್ನು ನಡೆಸಿದರು ಮತ್ತು ಇದನ್ನು ಪದ್ಮ ಭೂಷಣ ಪ್ರೊ ಎಂ. ಎಸ್. ಥ್ಯಾಕರ್ ರವರು 1964ರಲ್ಲಿ ಉದ್ಘಾಟಿಸಿದರು. ಸರ್ ಸಿ.ವಿ.ರಾಮನ್ ಅವರ ಸೋದರ ಸಂಬಂಧಿಯಾದ ಪ್ರೊಫೆಸರ್ ಎಸ್. ಚಂದ್ರಶೇಖರ್ ರವರು ಭೌತವಿಜ್ಞಾನ ಅಧ್ಯಯನ ವಿಭಾಗದ ಮೊದಲ ಅಧ್ಯಕ್ಷರಾಗಿದ್ದರು. ದ್ರವ ಸ್ಫಟಿಕಗಳ (Liquid crystals) ಕ್ಷೇತ್ರದಲ್ಲಿ ಪ್ರಖ್ಯಾತ ತಜ್ಞರಾಗಿದ್ದ ಇವರು ವಿಭಾಗದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಅಡಿಪಾಯವನ್ನು ಹಾಕಿಕೊಟ್ಟು ಪೋಷಿಸಿದರು. ಮೊದಲಿನಿಂದಲೂ ಈ ವಿಭಾಗವು ಬೋಧನೆ, ಸಂಶೋಧನೆ ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. 1969ರಲ್ಲಿ ಯುಜಿಸಿ ಪ್ರಾಯೋಜಿತ COSIP ನಾಯಕತ್ವ ಯೋಜನೆಯನ್ನು ರೂಪಿಸಿದಾಗ ಇಡೀ ದೇಶದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡ ಕೆಲವೇ ಕೆಲವು ವಿಭಾಗಗಳಲ್ಲಿ ಈ ವಿಭಾಗವೂ ಒಂದು. ಈ ಕಾರ್ಯಕ್ರಮವನ್ನು 1969-70ರ ಅವಧಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

 

ಈ ವಿಭಾಗವು ಏಕ ಸ್ಪಟಿಕ ಕ್ಷ-ಕಿರಣ ನಮನಮಾಪಕ (Single crystal x-ray diffractometer) ಸೌಲಭ್ಯವನ್ನು ಹೊಂದಿದ್ದು ಈ ಸಂಬಂಧದ ಸಂಶೋಧನೆಗೆ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅನೇಕ ಸಂಶೋಧಕರು ಇದರ ಸೌಲಭ್ಯವನ್ನು ನಿಯಮಿತವಾಗಿ ಬಳಸಿಕೊಂಡಿದ್ದಾರೆ. ವಿಭಾಗಕ್ಕೆ ನಿಯಮಿತವಾಗಿ DST, DAE, UGC ಮುಂತಾದ ಸಂಸ್ಥೆಗಳಿಂದ ಸಂಶೋಧನಾ ಯೋಜನೆಗಳ ಅನುದಾನ ದೊರೆತಿದೆ. DSTಯವರ  FIST ಅನುದಾನವನ್ನು ಬಳಸಿಕೊಂಡು ನಡೆಸಲಾಗಿರುವ ಸಂಶೋಧನ ಪ್ರಗತಿಯನ್ನು ‘ಉತ್ತಮ’ ಎಂದು ಘೋಷಣೆ ಮಾಡಲಾಗಿದೆ. ಕರ್ನಾಟಕ  ಸರ್ಕಾರವು ಈ ವಿಭಾಗವನ್ನು ‘ಉನ್ನತ ಅಧ್ಯಯನ ಕೇಂದ್ರ’ (Department of Advance Studies) ಎಂದು ಗುರುತಿಸಿದೆ. ಈ ವಿಭಾಗದಲ್ಲಿ ವಾತಾವರಣ ಭೌತವಿಜ್ಞಾನ ವಿಷಯವನ್ನು ಕಲಿಯುವ ಎಂಎಸ್ಸಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಇಸ್ರೋ ಸಂಸ್ಥೆಯು ಮಾಸಿಕ ಶಿಷ್ಯವೇತನ  ಅನುದಾನವನ್ನು ನೀಡಿದೆ. ಯುಜಿಸಿಯ ವಿಶೇಷ ನೆರವು ಯೋಜನೆ’ಯಡಿ (Special Assistance Program) ಅನುದಾನವನ್ನು ಪಡೆಯುತ್ತಿದೆ ಮತ್ತು ಪ್ರಸ್ತುತ ಈ ಯೋಜನೆಯ ಎರಡನೇ ಹಂತ ಜಾರಿಯಲ್ಲಿದೆ. UGC ಯವರ RFSMS ಯೋಜನೆಯಡಿಯಲ್ಲಿ ಹಲವು BSR ಶಿಷ್ಯವೇತನಗಳನ್ನು ಈ ವಿಭಾಗಕ್ಕೆ ಮಂಜೂರು ಮಾಡಲಾಗಿದೆ . 

 

ಸಂಶೋಧನಾ ಲೇಖನಗಳ ಪ್ರಕಟಣೆಗೆ ಸಂಬಂಧಿಸಿದಂತೆ ತಿಳಿಸುವುದಾದರೆ, ಈ ವಿಭಾಗದಲ್ಲಿನ ಅದ್ಯಾಪಕರುಗಳು ಘನ ಸ್ಥಿತಿ ಭೌತವಿಜ್ಞಾನ, ಪರಮಾಣು ಭೌತವಿಜ್ಞಾನ, ಸೈದ್ಧಾಂತಿಕ ಭೌತವಿಜ್ಞಾನ, ವಾತಾವರಣ ಭೌತವಿಜ್ಞಾನ, ವಿಕಿರಣ ಭೌತವಿಜ್ಞಾನ, ದ್ರವ ಸ್ಫಟಿಕಗಳ ಭೌತವಿಜ್ಞಾನ, ಅರೆವಾಹಕ ಭೌತವಿಜ್ಞಾನ, ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ತೊಡಗಿಸಿಕೊಂಡಿದ್ದಾರೆ. ಆರಂಭದಿಂದಲೂ ಈ ವಿಭಾಗವು ಹೆಚ್ಚಿನ ಸಂಖ್ಯೆಯ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದೆ. ಇದುವರೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ 1000 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟಗೊಂಡಿದ್ದು 200 ಕ್ಕೂ ಹೆಚ್ಚು ಪಿ.ಹೆಚ್.ಡಿಗಳು ದೊರಕಿವೆ. ಹಲವು ಅಧ್ಯಾಪಕರುಗಳು ಪದವಿ, ಸ್ನಾತಕೋತ್ತರ ಶಿಕ್ಷಣಕ್ಕೆ ಉಪಯುಕ್ತ ಪಠ್ಯ ಪುಸ್ತಕಗಳನ್ನು, ಮುಂದುವರಿದ ಸಂಶೋಧನ ಕ್ಷೇತ್ರಗಳಿಗೆ ಸಂಬಂದಿಸಿದ ಪುಸ್ತಕಗಳಿಗೆ ಲೇಖನಗಳನ್ನು ಬರೆದಿದ್ದಾರೆ. 

 

ಭಾರತೀಯ ವಿಜ್ಞಾನ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತಯ ತಂತ್ರಜ್ಞಾನ ಅಕಾಡೆಮಿಯವರ  (KSTA) ಸಹಯೋಗದೊಡನೆ ಅನೇಕ ವಿಶೇಷ ಉಪನ್ಯಾಸ ಸರಣಿ ಮತ್ತು ಕಾರ್ಯಗಾರಗಳನ್ನು ನಡೆಸಿಕೊಂಡು ಬಂದಿರುವುದರ ಜೊತೆಗೆ 2007 ರಲ್ಲಿ ಡಿ.ಎ.ಇ ಸಾಲಿಡ್ ಸ್ಟೇಟ್ ರಾಷ್ಟ್ರೀಯ ವಿಚಾರ ಗೋಷ್ಠಿಯನ್ನು ಮತ್ತು 82ನೇ ಭಾರತ ರಾಷ್ಠ್ರೀಯ ವಿಜ್ಞಾನ ಕಾಂಗ್ರೆಸ್ ಗಳನ್ನು ನಡೆಸಿದೆ. ಇಷ್ಟೇ ಅಲ್ಲದೆ ಈ ವಿಭಾಗವು 20 ಕ್ಕೂ ಹೆಚ್ಚು ಪುನಶ್ಚೇತನ ಶಿಬಿರಗಳು ಮತ್ತು ಕೆಲವು ಸ್ಯಾಪ್ ವಿಶೇಷ ಉಪನ್ಯಾಸಗಳನ್ನೂ ಕೂಡ ನಡೆಸಿದೆ. ನೊಬೆಲ್ ಪ್ರಶಸ್ತಿ ವಿಜೇತರಾದ ಪ್ರೊಫೆಸರ್ ನಿಶಿಜಿಮ, ಪ್ರೊಫೆಸರ್ ಡಿ ಜೆನ್ನಸ್ ಮತ್ತು ಹಲವು ಹಿರಿಯ ವಿಜ್ಞಾನಿಗಳು, ಹಲವಾರು ಸಂಶೋಧನಾ ವಿದ್ವಾಂಸರುಗಳು ಈ ವಿಭಾಗಕ್ಕೆ ಬೇಟಿ ನೀಡಿ ಉಪನ್ಯಾಸಗಳನ್ನು ನೀಡಿರುತ್ತಾರೆ.

 

ಈ ವಿಭಾಗದಲ್ಲಿ ಆರಂಭದಿಂದಲೂ ಬಿಎಸ್ಸಿ ಪದವಿ ನಂತರದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಎಂಎಸ್ಸಿ ಭೌತವಿಜ್ಞಾನ ಕೋರ್ಸ್ ನಡೆಸಲಾಗುತ್ತಿದೆ. 2005 ರಿಂದ 2012ರವರೆಗೆ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ 5 ವರ್ಷಗಳ ಸಮಗ್ರ ಎಂ.ಎಸ್ಸಿ  ಭೌತವಿಜ್ಞಾನ ಕೋರ್ಸನ್ನು ಕೂಡ ನಡೆಸಲಾಗಿದೆ. ನಿಯತವಾಗಿ ಪಠ್ಯಕ್ರಮ ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಷ್ಕರಿಸಲಾಗುತ್ತಿದೆ ಹಾಗು ವಿದ್ಯಾರ್ಥಿ ಕೇಂದ್ರಿತ ಮತ್ತು ವಿಷಯ ಕೇಂದ್ರಿತ ಬೋಧನಾ ವಿಧಾನಗಳನ್ನು ತರಗತಿ ಬೋಧನೆ ಮತ್ತು ಪ್ರಯೋಗಾಲಯದ ತರಬೇತಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಅಗತ್ಯ ಶೈಕ್ಷಣಿಕ ಸಾಮರ್ಥ್ಯವನ್ನು ಹೊಂದುವಂತೆ ಮಾಡಲು ಮತ್ತು ಅವರನ್ನು ಶೈಕ್ಷಣಿಕವಾಗಿ ಸಕ್ರಿಯಗೊಳಿಸಲು ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟ್ಯುಟೋರಿಯಲ್, ವಿಚಾರಗೋಷ್ಠಿಗಳು ಮತ್ತು ಯೋಜನೆಯ (Project) ಕೆಲಸಗಳನ್ನು ಅಳವಡಿಸಲಾಗಿದೆ. ನಮ್ಮ ವಿಭಾಗದಲ್ಲಿ ಅಧ್ಯಯನ ಮಾಡಿದ ಬಹುತೇಕ ವಿದ್ಯಾರ್ಥಿಗಳು ನಾಡಿನ ಕಾಲೇಜುಗಳಲ್ಲಿ ಅದ್ಯಾಪಕರಾಗಿ, ಹಲವು ವಿದ್ಯಾರ್ಥಿಗಳು ಭಾರತದ ಮತ್ತು ಹೊರದೇಶಗಳ ಅತ್ಯಂತ ಮುಂದುವರಿದ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಈ ವಿಭಾಗದಲ್ಲಿನ ಉನ್ನತ ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯಕ್ರಮವನ್ನು ಪ್ರತಿಬಿಂಬಿಸುತ್ತದೆ.

 

ಈ ವಿಭಾಗದ ಮೂವರು ಹಿರಿಯ ಪ್ರಾಧ್ಯಾಪಕರುಗಳು ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಅದ್ಯಾಪಕರುಗಳು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಮತ್ತು ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದು, ಹಲವು ಸಂಶೋಧನಾ ಪತ್ರಿಕೆಗಳ ಸಂಪಾದಕೀಯ ಮಂಡಳಿ ಸದಸ್ಯರಾಗಿರುತ್ತಾರೆ. ಕನ್ನಡದಲ್ಲಿ ವಿಜ್ಞಾನವನ್ನು ಅರಿಯಲು ಮತ್ತು  ಕರ್ನಾಟಕದಲ್ಲಿ ವಿಜ್ಞಾನದ ಅಭಿವೃದ್ಧಿಗೆ ನೆರವಾಗಲು ಕನ್ನಡ ಭಾಷೆಯಲ್ಲಿ ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ರಚಿಸಲಾಗಿದೆ. ನಮ್ಮ ವಿಭಾಗದ ಸಿಬ್ಬಂದಿ ಕೈಗಾರಿಕೆಗಳ ಜೊತೆ ಕೆಲಸಮಾಡಿ ಸಕಾರಾತ್ಮಕ ರೀತಿಯಲ್ಲಿ ವಿಶ್ವವಿದ್ಯಾಲಯ ಮತ್ತು ಉದ್ಯಮಗಳ ಬೆಳವಣಿಗೆಗೆ ಸಹಾಯಕವಾಗಿದ್ದಾರೆ. 

 

ಈ ವಿಭಾಗದಲ್ಲಿ ನಿಯಮಿತ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂಶೋಧನೆ ಚಟುವಟಿಕೆಗಳ ಜೊತೆಗೆ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯ ಕಡೆಗೆ ಆಸಕ್ತಿ ಹೆಚ್ಚಿಸುವುದಕ್ಕಾಗಿ ವಿಜ್ಞಾನ ಸಂವಾದ ಕಾರ್ಯಕ್ರಮಗಳು, ವಿಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳು, ಉಪನ್ಯಾಸ ಕಾರ್ಯಕ್ರಮಗಳು ಮತ್ತು ಕಾರ್ಯಗಾರಗಳನ್ನು ನಿಯಮಿತವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರಿಗಾಗಿ ಈ ವಿಭಾಗದಲ್ಲಿ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮಗಳನ್ನು ಆಗಾಗ್ಗೆ ಏರ್ಪಡಿಸಲಾಗಿದೆ. ದೂರದರ್ಶಕದ ಮೂಲಕ ರಾತ್ರಿ ಆಕಾಶ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.